ನ್ಯೂ ಬ್ರನ್ಸ್‍ವಿಕ್ 2 -
ಉತ್ತರ ಅಮೆರಿಕ ಖಂಡದಲ್ಲಿ ಕೆನಡ ದೇಶಕ್ಕೆ ಸೇರಿದ ಒಂದು ಪ್ರಾಂತ್ಯ. ಆ ದೇಶದ ಪೂರ್ವ ಕರಾವಳಿಗೆ ತಾಗಿ ಉ.ಅ.45ಲಿ-48ಲಿ ಮತ್ತು ಪ.ರೇ 63ಲಿ-69ಲಿ ನಡುವೆ ಇದೆ. ಉತ್ತರದಲ್ಲಿ ಕೆನಡದ ಕ್ವಿಬೆಕ್ ಪ್ರಾಂತ್ಯ, ಪಶ್ಚಿಮದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳ, ಮೇನ್ ರಾಜ್ಯ, ದಕ್ಷಿಣದಲ್ಲಿ ಫಂಡೀ ಕೊಲ್ಲಿ, ಪೂರ್ವದಲ್ಲಿ ಸೆಂಟ್ ಲಾರೆನ್ಸ್ ಖಾರಿ ಇದೆ. ವಿಸ್ತೀರ್ಣ 73,437 ಚ.ಕಿಮೀ. ಜನಸಂಖ್ಯೆ 6,34,557 (1970). ರಾಜಧಾನಿ ಪ್ರೆಡರಿಕ್‍ಟನ್ (23,612). ಪ್ರಾಂತ್ಯದ ಅತ್ಯಂತ ದೊಡ್ಡ ನಗರ ಸೆಂಟ್ ಜಾನ್. (1,05,227) ಇನ್ನೊಂದು ಮುಖ್ಯ ನಗರ ಮಾಂಕ್‍ಟನ್ (47,781).

ಇತಿಹಾಸ : ಯೂರೋಪಿಯನ್ನರು ಬರುವುದಕ್ಕೆ ಮುಂಚೆ ಮಿಕ್ ಮ್ಯಾಕ್ ಮತ್ತು ಮಲೆಸೈಟ್ ಎಂಬ ಅಮೆರಿಕನ್ ಮೂಲ ನಿವಾಸಿ ಪಂಗಡಗಳು ವಾಸಿಸುತ್ತಿದ್ದ ಈ ಪ್ರದೇಶಕ್ಕೆ ಮೊದಲು ಫ್ರೆಂಚರು ವಲಸೆ ಬಂದರು. 1755ರ ಬ್ಯೂಸೆಜೋರ್ ಯುದ್ಧದಲ್ಲಿ ಬ್ರಿಟಿಷರು ಅವರನ್ನು ಸೋಲಿಸಿ, ತಮಗೆ ಸೇರಿದ್ದ ನೆರೆಯ ನೋವಸ್ಕೋಷಿಯ ಪ್ರಾಂತ್ಯದಲ್ಲಿ ಅದನ್ನು ಸೇರಿಸಿ ಫ್ರೆಂಚ್ ನಿವಾಸಿಗಳನ್ನು ಪೂರ್ತಿ ಉಚ್ಚಾಟನೆ ಮಾಡಿದರು. ಆಗ ಬ್ರಿಟಿಷ್ ವಲಸೆ ಪ್ರಾರಂಭವಾಯಿತು. ಸ್ವಲ್ಪ ಕಾಲಾನಂತರ ಕೆಲವು ಫ್ರೆಂಚರು ಮರಳಿ ಬಂದರು. 1784ರಲ್ಲಿ ಮತ್ತೆ ನೋವಸ್ಕೋಷಿಯದಿಂದ ಬೇರ್ಪಟ್ಟ ನ್ಯೂ ಬ್ರನ್ಸ್‍ವಿಕ್‍ಗೆ 1848ರಲ್ಲಿ ಸ್ವಾಯತ್ತಾಧಿಕಾರ ಕೊಡಲಾಯಿತು. 1867ರಲ್ಲಿ ಕೆನಡಕ್ಕೆ ಸ್ವರಾಜ್ಯ ಕೊಟ್ಟಾಗ ಅದರ ಸಂಯುಕ್ತ ರಾಜ್ಯದಲ್ಲಿ ಸೇರಿದ ನಾಲ್ಕು ಪ್ರಾಂತ್ಯಗಳಲ್ಲಿ ನ್ಯೂ ಬ್ರನ್ಸ್‍ವಿಕ್ ಒಂದಾಯಿತು.

ಪ್ರಾಕೃತಿಕ ಲಕ್ಷಣಗಳು : ಪಶ್ಚಿಮದಲ್ಲಿ 820 ಮೀ. ವರೆಗೂ ಏರುವ ಶಿಖರಗಳುಳ್ಳ ಪರ್ವತಶ್ರೇಣಿ ಇದೆ. ಪಶ್ಚಿಮ ಭಾಗದಲ್ಲಿ ಸೆಂಟ್ ಜಾನ್ ಮತ್ತು ಸೆಂಟ್ ಲಾರೆನ್ಸ್, ಪೂರ್ವ ಭಾಗದಲ್ಲಿ ರೆಸ್ಟಿಗೂಷ್, ಮಿರಮಿಷೀ ಮತ್ತು ಪೆಟೀ ಕೋಡಿಯಾಕ್ ನದಿಗಳು ಮುಖ್ಯವಾದವು. ಇಲ್ಲಿಯದು ಶೀತ ವಾಯುಗುಣ. ಚಳಿಗಾಲದಲ್ಲಿ ಸರಾಸರಿ 34ಲಿ ಸೆ. ಬೇಸಗೆಯಲ್ಲಿ 32ಲಿ ಸೆ. ಉಷ್ಣತೆ ಇರುತ್ತದೆ. ವಾರ್ಷಿಕ ಮಳೆ ಸರಾಸರಿ 1,000-1.1,125 ಮಿಮೀ. ಹಿಮಪಾತ ಸುಮಾರು 2,540 ಮಿಮೀ.
ಮಣ್ಣು ಆಮ್ಲಯುತ ಮತ್ತು ಕಲ್ಲಿನಿಂದ ಕೂಡಿದ್ದು ಆಗಿರುವುದರಿಂದ ಕೃಷಿಗೆ ಅನುಕೂಲವಾಗಿಲ್ಲ. ಸೇಕಡ 86ರಷ್ಟು ಪ್ರದೇಶ ಅರಣ್ಯಮಯ. ಅದನ್ನು ಇನ್ನೂ ವಿಸ್ತರಿಸಲಾಗುತ್ತಿದೆ. ಅರಣ್ಯ ಸಂಪತ್ತೇ ಪ್ರಾಂತ್ಯದ ಮುಖ್ಯ ಆರ್ಥಿಕ ಆಧಾರ. ಒಂದು ಕಾಲದಲ್ಲಿ ವಿಪುಲವಾಗಿದ್ದ ಪೀತದಾರು ವೃಕ್ಷಗಳು ಈಗ ನಶಿಸುತ್ತಿದ್ದರೂ ಈಗ ಮೇಪ್‍ಲ್, ಭೂರ್ಜ, ಸ್ಪ್ರೂಸ್, ಶಂಕುಫಲಿ ಪ್ರಧಾನವಾಗಿವೆ. ಖನಿಜಸಂಪತ್ತೂ ಅಷ್ಟಿಷ್ಟಿದೆ. ನದಿಗಳು ಮೀನಿನಿಂದ ಸಮೃದ್ಧವಾಗಿದೆ. ಅರಣ್ಯಗಳಲ್ಲಿ ಹಿಂಡುಹಿಂಡಾಗಿ ಅಲೆಯುವ ಮೂಸ್ ಕಡವೆಗಳು ದೇಶವಿದೇಶಗಳಿಂದ ಬೇಟೆಗಾರರನ್ನು ಆಕರ್ಷಿಸುತ್ತವೆ.

ಜನ ಮತ್ತು ಆಡಳಿತ : ಜನಸಂಖ್ಯೆಯಲ್ಲಿ ಸೇಕಡ 40ರಷ್ಟು ಮಂದಿ ಫ್ರೆಂಚ್ ಭಾಷೆ ಆಡುವವರು. ಬಹುಸಂಖ್ಯಾತರಾದ, ಇಂಗ್ಲಿಷ್ ಭಾಷೆ ಆಡುವ ಜನರ ಪೈಕಿ ಅಮೆರಿಕ ಸಂಯುಕ್ತ ಸಂಸ್ಥಾನಗಳು ಬ್ರಿಟಿಷರಿಂದ ಸ್ವತಂತ್ರವಾದ ಮೇಲೆ ಅಲ್ಲಿಂದ ಬಂದು ನೆಲೆಸಿದ ರಾಜಭಕ್ತರ ವಂಶಜರೂ ಐರಿಷ್ ಮತ್ತು ಸ್ಕಾಟ್ ಮೂಲದವರೂ ಇದ್ದಾರೆ. ಇತ್ತೀಚೆಗೆ ಡೆನ್ಮಾರ್ಕ್ ಮತ್ತು ಹಾಲೆಂಡಿನಿಂದ ಬಂದವರೂ 4,000 ಮೂಲ ನಿವಾಸಿ ಇಂಡಿಯನ್ನರೂ 5,500 ರಷ್ಟು ಕಪ್ಪು ವರ್ಣೀಯರೂ ಇದ್ದಾರೆ. ಫ್ರೆಂಚ್ ಭಾಷೆ ಆಡುವವರು ತಮ್ಮ ಪ್ರತ್ಯೇಕ ಸಂಸ್ಕøತಿಯನ್ನು ಕಾಪಾಡಿಕೊಂಡು ಬಂದಿದ್ದರೂ ಈಚೆಗಿನ ವರೆಗೆ ಭಾಷಾವೈಷಮ್ಯ ಇರಲಿಲ್ಲ. ಈಗ ನೆರೆಯ ಕ್ವಿಬೆಕ್ ಪ್ರಾಂತ್ಯದಿಂದ ಫ್ರೆಂಚ್ ಪ್ರತ್ಯೇಕತಾ ಭಾವನೆ ಇಲ್ಲಿಗೂ ಹಬ್ಬಿದೆ. ತಮ್ಮ ವಿರುದ್ಧ ಪಕ್ಷಪಾತವಾಗುತ್ತಿದೆ ಎಂದು ಫ್ರೆಂಚ್ ಮಾತಾಡುವವರು ದೂರುತ್ತಿದ್ದಾರೆ. ಅವರನ್ನು ಸಮಾಧಾನಗೊಳಿಸಲು 1960 ಈಚೆಗೆ ಮಂತ್ರಿಸಂಪುಟದಲ್ಲಿ ಅವರಿಗೆ ಹೆಚ್ಚಿನ ಪ್ರಾತಿನಿಧ್ಯ ಕೊಟ್ಟು ಫ್ರೆಂಚನ್ನು ದ್ವಿತೀಯ ಭಾಷೆಯನ್ನಾಗಿ ಅಂಗೀಕರಿಸಲಾಗಿದೆ. ಜನರಲ್ಲಿ ಸೇ.51ರಷ್ಟು ಮಂದಿ ಕ್ಯಾತೊಲಿಕ್ ಕ್ರೈಸ್ತರು ಉಳಿದವರಲ್ಲಿ ಪ್ರಾಟೆಸ್ಟಂಟರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

	ಬ್ರಿಟಿಷ್ ಉತ್ತರ ಅಮೆರಿಕನ್ ಕಾನೂನಿನ ಪ್ರಕಾರ ಸಂಘಟಿತವಾದ ಪ್ರಾಂತೀಯ ಆಡಳಿತದಲ್ಲಿ 15 ಜನಪದಗಳು ಮತ್ತು 6 ನಗರಗಳನ್ನು ಪ್ರತಿನಿಧಿಸುವ 58 ಸದಸ್ಯರ ಪ್ರತಿನಿಧಿ ಸಭೆಗೆ ಅಧೀನವಾಗಿ 13 ಜನರ ಮಂತ್ರಿಮಂಡಲವಿದೆ. ಶಿಕ್ಷಣ ಮೊದಲಾದ ಆಂತರಿಕ ವಿಷಯಗಳು ಪ್ರಾಂತೀಯ ಸರ್ಕಾರಕ್ಕೆ ಸೇರಿದವು. ಈಚೆಗಿನ ವರ್ಷಗಳಲ್ಲಿ ಪ್ರಾಂತೀಯ ಸರ್ಕಾರದ ಅಧಿಕಾರದ ಕಕ್ಷೆ ವಿಸ್ತರಿಸುತ್ತಿದೆ. ಸಂವಿಧಾನದ ಪ್ರಕಾರ ಐದು ವರ್ಷಗಳಿಗೊಮ್ಮೆ ಚುನಾವಣೆಗಳು ನಡೆಯಬೇಕಿದ್ದರೂ ವಾಸ್ತವವಾಗಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತಿದೆ. ಕನ್ಸರ್ವೆಟಿವ್ ಮತ್ತು ಲಿಬರಲ್ ಪಕ್ಷಗಳು ಮುಖ್ಯವಾಗಿವೆ.

	ಪ್ರಾಂತ್ಯದ ಆದಾಯದಲ್ಲಿ ಸೇಕಡ 50ರಷ್ಟು ಬರುವುದು ಅಟವಾದಲ್ಲಿರುವ ಕೇಂದ್ರ ಸರ್ಕಾರದಿಂದ, ಕುಟುಂಬ ಭತ್ಯ, ವೃದ್ಧಾಪ್ಯ ವೇತನ, ನಿರುದ್ಯೋಗ ಭತ್ಯ ಮೊದಲಾದವನ್ನು ಕೇಂದ್ರವೇ ವಹಿಸುತ್ತಿದೆ. ಆದರೂ ನ್ಯೂ ಬ್ರನ್ಸ್‍ವಿಕ್ ಪ್ರಾಂತ್ಯದ ತೆರಿಗೆ ದರಗಳು ಕೆನಡದ ಇತರ ಪ್ರಾಂತ್ಯಗಳಲ್ಲಿರುವುದಕ್ಕಿಂತ ಹೆಚ್ಚು.

	ಆರ್ಥಿಕ ಸ್ಥಿತಿಗತಿ : 18ನೆಯ ಶತಮಾನದಲ್ಲಿ ಬ್ರಿಟಿಷರು ನ್ಯೂ ಬ್ರನ್ಸ್ ವಿಕ್ ಪ್ರಾಂತ್ಯವನ್ನು ಗೆದ್ದುಕೊಂಡಾಗ ಇದ್ದ ಆರ್ಥಿಕ ಆಶೋತ್ತರ ಮುಂದೆ ಉಳಿಯಲ್ಲಿಲ್ಲ ಭೂಮಿ ಕೃಷಿಗೆ ಅನುಕೂಲವಿದ್ದು ಇದಕ್ಕೆ ಮುಖ್ಯ ಕಾರಣ. 19ನೆಯ ಶತಮಾನದಲ್ಲಿ ನೆಪೋಲಿಯನ್ ಯುದ್ಧಗಳ ಕಾಲದಲ್ಲಿ ಇಲ್ಲಿಯ ಅರಣ್ಯ ಸಂಪತ್ತು ಹೆಸರಾಂತ ಹಡಗು ಕಟ್ಟುವ ಉದ್ಯೋಗಕ್ಕೆ ಆಧಾರವಾದರೂ ಮುಂದೆ ಆರ್ಥಿಕ ಅವನತಿ ಆರಂಭವಾಯಿತು. ಪ್ರಾಂತೀಯ ಉತ್ಪಾದನೆಯಲ್ಲಿ ಸೇಕಡ 65ರಷ್ಟು (1970) ಅರಣ್ಯಮೂಲವಾದ್ದು. ಏಳು ದೊಡ್ಡ ಕಾಗದ ಕಾರ್ಖಾನೆಗಳು ಮತ್ತು ಅನೇಕ ಮರ ಕೊಯ್ಯುವ ಕಾರ್ಖಾನೆಗಳು ಇವೆ. ಜಲ ಮತ್ತು ಶಾಖ ವಿದ್ಯುತ್ ಉತ್ಪಾದನೆ 40 ಲಕ್ಷ ಕಿವಾ. ಕೃಷಿಕರ ಸಂಖ್ಯೆ 10ಕ್ಕಿಂತ ಕಡಿಮೆ. ಫಂಡೀ ಕೊಲ್ಲಿಯಲ್ಲಿ ಮೀನುಗಾರಿಕೆ ನಡೆಯುತ್ತದೆ. ಈಚೆಗೆ ಕೆಲವು ಲೋಹಗಳ ಗಣಿಗಾರಿಕೆ ಬೃಹತ್ತಾಗಿ ಬೆಳೆಯುತ್ತಿದೆ. ಪಟ್ಟಣವಾಸಿಗಳ ಸಂಖ್ಯೆ ಸೇಕಡ 50ಕ್ಕೂ ಹೆಚ್ಚು.

	ಸರ್ಕಾರ ಎಷ್ಟೇ ಪ್ರಯತ್ನಿಸಿದರೂ ನ್ಯೂ ಬ್ರನ್ಸ್ ವಿಕ್ ಆರ್ಥಿಕ ಅವನತಿಯ ದೆಸೆಯಿಂದ ಚೇತರಿಸುತ್ತಿಲ್ಲ. ಅದರ ತಲಾ ವರಮಾನ ಅಖಿಲ ಕೆನಡದ ಸರಾಸರಿಯ ಸೇಕಡ 66ಕ್ಕಿಂತ ಕಡಿಮೆ ಇದೆ. ಜನನ ಪ್ರಮಾಣ ಹೆಚ್ಚಾಗಿದ್ದರೂ ಹೊರಗೂ ವಲಸೆ ಹೋಗುತ್ತಿರುವುದರಿಂದ ಜನಸಂಖ್ಯೆ ಹೆಚ್ಚುತ್ತಿಲ್ಲ. ಸರ್ಕಾರ ವಿಸ್ತಾರವಾದ ರಸ್ತೆ ಮತ್ತು ಬಂದರು ಅಭಿವೃದ್ಧಿಯಲ್ಲಿ ವಿಪುಲ ಬಂಡವಾಳ ತೊಡಗಿಸಿ ಅವನತಿಯನ್ನು ತಡೆಯಲು ಯತ್ನಿಸುತ್ತದೆ. ವಿಶೇಷವಾಗಿ ಅಟ್ಲಾಂಟಿಕ್ ಸಾಗರ ಕರಾವಳಿಯಲ್ಲಿ ಕೈಗೊಂಡಿರುವ ಆಳನೀರಿನ ಸೆಂಟ್ ಜಾನ್ ಸರ್ವಋತು ಬಂದರು ಸಂಕೀರ್ಣದ ಬೆಳೆವಣಿಗೆಯಿಂದ ಪ್ರಾಂತ್ಯದ ಆರ್ಥಿಕ ಉದ್ಧಾರಕ್ಕೆ ಚಾಲನೆ ಸಿಗಬಹುದೆಂಬ ಆಶೆಯೊಂದು ಸಾಧಾರಣವಾಗಿ ಕಾಣುತ್ತಿದೆ. ಏಕೆಂದರೆ ಉತ್ತರದ ಸೇಂಟ್‍ಲಾರೆನ್ಸ್ ಖಾರಿಯ ಬಂದರುಗಳಲ್ಲಿ ಚಳಿಗಾಲದಲ್ಲಿ ಸಮುದ್ರ ಹೆಪ್ಪುಗಟ್ಟಿರುತ್ತದೆ. ದೇಶದ ಎರಡು ಪ್ರಮುಖ ರೈಲುಮಾರ್ಗಗಳೂ ಇಲ್ಲಿ ಸಂಧಿಸುತ್ತವೆ. 1950ರಿಂದ ರಸ್ತೆ ವ್ಯವಸ್ಥೆಯನ್ನು ಆಧುನೀಕರಿಸಲಾಗುತ್ತಿದೆ. ಸೇಂಟ್ ಜಾನ್, ಮಾಂಕ್‍ಟನ್ ಮತ್ತು ಫ್ರೆಡರಿಕ್‍ಟನ್‍ನಲ್ಲಿ ದೊಡ್ಡ ವಿಮಾನ ನಿಲ್ದಾಣಗಳೂ ಉತ್ತರದಲ್ಲಿ ಆರು ಸಣ್ಣ ನಿಲ್ದಾಣಗಳೂ ಇವೆ.
(ಪಿ.ವಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ